ಪಚಮಾರಿ 
	ಮಧ್ಯಪ್ರದೇಶದ ಹೋಷಂಗಾಬಾದ್ ಜಿಲ್ಲೆಯ ಸೋಹಾಗ್‍ಪುರ್ ತಾಲ್ಲೂಕಿನಲ್ಲಿರವ ಗಿರಿಧಾಮ ಹಾಗೂ ಪಟ್ಟಣ.  ಸಾತ್ಪುರ ಬೆಟ್ಟ ಸಾಲುಗಳ ತಲೆಯ ಮೇಲೆ, ಉ.ಅ. 22 ಡಿ.28 - ಪೂ.ರೇ. 78 ಡಿ.26 ಮೇಲೆ ಪಿಪಾರಿಯ ರೈಲ್ವೆ ನಿಲ್ದಾಣಕ್ಕೆ ಸುಮಾರು 51 ಕಿ.ಮೀ.ದೂರದಲ್ಲಿ ಇದೆ.  ಸಮುದ್ರಮಟ್ಟದಿಂದ 1.067 ಮೀ. ಎತ್ತರದಲ್ಲಿರುವ ಈ ಸ್ಥಳ ಆರೋಗ್ಯಧಾಮಕ್ಕೆ ಯೋಗ್ಯವಾಗಿದೆಯೆಂದು 19ನೆಯ ಶತಮಾನದಲ್ಲಿ ಇಲ್ಲಿಗೆ ಬಂದ ಕ್ಯಾಪ್ಟನ್ ಫಾಸೈತ್ ವರದಿ ಮಾಡಿದ. ಪಚಮಾರಿ ಎಂಬ ಹೆಸರು ಪಾಂಚ್ ಮತಿ (ಐದು ಹಟ್ಟಿಗಳು) ಎಂಬುದರಿಂದ ಬಂದಿದೆ.  ಇದು ಸಾತ್ಪುರದ ಮೇಲಿನ ತೆರಪಿನಲ್ಲಿರುವ ಐದು ಗವಿಗಳುಳ್ಳ ಸಣ್ಣ ಬೆಟಕ್ಕೆ ಅನ್ವಯಿಸುತ್ತದೆ.  ಈ ಐದು ಗವಿಗಳಲ್ಲಿ ಪಂಚಪಾಂಡವರು ತಮ್ಮ ವನವಾಸ ಕಾಲದಲ್ಲಿ ತಂಗಿದ್ದರೆಂಬ ಪ್ರತೀತಿ ಇದೆ.  ಇಲ್ಲಯ ಮೇ ತಿಂಗಳ ಮಾಧ್ಯ ಉಷ್ಣತೆ 29 ಡಿ.ಸೆ. ಮಳೆಗಾಲದ ಅನಂತರ ಸೆಪ್ಟಂಬರ್-ಅಕ್ಟೋಬರ್ ತಿಂಗಳುಗಳಲ್ಲಿ 21 ಡಿ.ಸೆ. ಉಷ್ಣತೆ ಇರುತ್ತದೆ. ವಾರ್ಷಿಕ ಸರಾಸರಿ ಮಳೆ 1.956 ಮಿ.ಮೀ.

	ಪಚಮಾರಿ ಗಿರಿಧಾಮ ಬ್ರಿಟಿಷರ ಕಾಲದಲ್ಲಿ ಮಧ್ಯ ಪ್ರಾಂತ್ಯ ಸರ್ಕಾರದ ಬೇಸಗೆ ಕೇಂದ್ರವಾಗಿತ್ತು.  ಪಚಮಾರಿ ಬಯಲಿನ ವಿಸ್ತೀರ್ಣ 56 ಚ.ಕಿಮೀ. ಈ ಬಯಲನ್ನು ಸುತ್ತವರಿದಂತೆ ಹಲವು ಬೆಟ್ಟಗಳಿವೆ.  ಅವುಗಳಲ್ಲಿ ಪ್ರಧಾನವಾದವು ಧೂಪ್‍ಗಢ್ (1.358 ಮೀ.), ಮಹಾದೇವೊ (1,336ಮೀ.), ಚೌರಾಗಢ್ (1,316 ಮೀ.).  ಇಲ್ಲಿ ಅರಣ್ಯಗಳಲ್ಲಿ ಸಾಲವೃಕ್ಷಗಳು ಅಧಿಕವಾಗಿವೆ.  ಪಚಮಾರಿ ಪಟ್ಟಣಪ್ರದೇಶದ ಜನಸಂಖ್ಯೆ 9,224 (1971).  ಪಚಮಾರಿಯಲ್ಲಿ 1889ರಲ್ಲಿ ಪೌರಸಭೆ ಸ್ಥಾಪಿತವಾಯಿತು.
(ವಿ.ಜಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ